ಕೌಟುಂಬಿಕ ಕಲಹ: ರಾಜಿ-ಸಂಧಾನಕ್ಕೆ ಸ್ನೇಹಿತನ ಜೊತೆ ಹೋಗಿದ್ದ ಯುವಕನ ಬರ್ಬರ ಹತ್ಯೆ ಅಲಿ ಖಾನ್ ಮತ್ತು ಅಫ್ಸಾನ್ ಆತ್ಮೀಯ ಸ್ನೇಹಿತರಾಗಿದ್ದು, ಖಾನ್ ಮೆಕ್ಯಾನಿಕ್ ಆಗಿದ್ದು, ಅಫ್ಸಾನ್ ವೃತ್ತಿಯಲ್ಲಿ ಡ್ರೈವರ್ ಆಗಿದ್ದ. ಬೆಂಗಳೂರು: ಕೌಟುಂಬಿಕ ಕಲಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಿ-ಸಂಧಾನಕ್ಕೆಂದು ಸ್ನೇಹಿತನೊಂದಿಗೆ ಹೋಗಿದ್ದ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ರಾಮನಗರ ಟೌನ್ ನಲ್ಲಿ ನಡೆದಿದೆ.ರಾಮನಗರದ ರೆಹಮಾನಿಯಾ ನಗರದ ನಿವಾಸಿ ಸೈಯದ್ ಅಫ್ಸಾನ್ (28) ಹತ್ಯೆಯಾದ ದುರ್ದೈವಿ. ಭಾನುವಾರ ರಾತ್ರಿ 8 ರಿಂದ 8.15 ರ ನಡುವೆ ಈ ಘಟನೆ ನಡೆದಿದೆ.ಚಾಕುವಿನಿಂದ ಇರಿತಕ್ಕೊಳಗಾದ ಅಫ್ಸಾನ್‌ನನ್ನು ಮೊದಲು ರಾಮನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಅಲ್ಲಿಂದ ರಾತ್ರಿ 10.45 ರ ಸುಮಾರಿಗೆ ಕೆಂಗೇರಿ ಬಳಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ.ಘಟನೆ ಸಂಬಂಧ ಸ್ನೇಹಿತ ಇಮ್ದಾದ್ ಅಲಿ ಖಾನ್ (28) ಅವರು ದೂರು ದಾಖಲಿಸಿದ್ದಾರೆ. ಅಲಿ ಖಾನ್ ಮತ್ತು ಅಫ್ಸಾನ್ ಆತ್ಮೀಯ ಸ್ನೇಹಿತರಾಗಿದ್ದು, ಖಾನ್ ಮೆಕ್ಯಾನಿಕ್ ಆಗಿದ್ದು, ಅಫ್ಸಾನ್ ವೃತ್ತಿಯಲ್ಲಿ ಡ್ರೈವರ್ ಆಗಿದ್ದ.ಕಳೆದ 18 ತಿಂಗಳ ಹಿಂದೆ ವಿವಾಹವಾಗಿದ್ದ ಖಾನ್'ಗೆ ಪತ್ನಿಯೊಂದಿಗೆ ಸಮಸ್ಯೆಗಳಿದ್ದವು. ಪತಿ ಮನೆಯಲ್ಲಿ ಜಗಳವಾಡಿದ್ದ ಖಾನ್ ಪತ್ನಿ ಪೋಷಕರ ಮನೆಗೆ ಹೋಗಿದ್ದಳು. ನಂತರ, ಆಕೆಯ ಪೋಷಕರು ಪತಿ ಮನೆಗೆ ಕಳುಹಿಸಿದ್ದ. ಈ ನಡುವೆ ಖಾನ್ ಪತ್ನಿ ಹಾಗೂ ಮಗ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ರಾಜಿ-ಸಂಧಾನಕ್ಕೆ ಕರೆದಿದ್ದಾರೆ.ಠಾಣೆಯಲ್ಲಿ ಎರಡೂ ಕುಟುಂಬದವರು ರಾಜಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಬಳಿಕ ಮನೆಗೆ ಹಿಂದಿರುಗುತ್ತಿದ್ದಾಗ, ಖಾನ್ ಅವರ ಪತ್ನಿಯ ಸಂಬಂಧಿಕರು ಮತ್ತೆ ಕ್ಯಾತೆ ತೆಗೆದಿದ್ದಾರೆ. ಟಿಪ್ಪುನಗರ ಹೊಸ ಎಕ್ಸ್‌ಟೆನ್ಶನ್ ಬಳಿ ಮತ್ತೆ ಜಗಳ ಶುರುವಾಗಿದೆ. ಖಾನ್ ಅವರ ಮೇಲೆ ದಾಳಿ ನಡೆಸಲು ಆರಂಭಿಸಿದಾಗ , ಅಫ್ಸಾನ್ ತನ್ನ ಸ್ನೇಹಿತನಿ ನೆರವಿಗೆ ಬಂದಿದ್ದಾನೆ. ಈ ವೇಳೆ ಚಾಕುವಿನಿಂದ ಇರಿಯಲಾಗಿದೆ.ಘಟನೆ ಬಳಿಕ ಖಾನ್ ಏಳು ಮಂದಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಈ ಪೈಕಿ ಮೂವರನ್ನು ಬಂಧಿಸಲಾಗಿದೆ. ಇತರ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.ಮೃತ ಅಫ್ಸಾನ್‌ನ ಸಹೋದರ ಜೀಶಾನ್ ಮಾತನಾಡಿ, ಸ್ನೇಹಿತನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಕ್ಕಾಗಿ ಕೊಲೆ ಮಾಡಲಾಗಿದೆ, ಇದು ಅತ್ಯಂತ ದುರದೃಷ್ಟಕರ ಎಂದು ಕಣ್ಣೀರಿಟ್ಟಿದ್ದಾರೆ.